ಅನ್ನದೇಗುಲ ಎಂಬ ವಾಸ್ತವ ಕವಿತೆ
- ಅನಿತ ಅನುಕೃತಿ

         ಮನುಷ್ಯನ ಬದುಕನ್ನು ಕಾಲಕಾಲಕ್ಕೆ  ಇತಿಹಾಸವಾಗಿಸುವಲ್ಲಿ ಸಾಹಿತ್ಯದ ಹಾದಿಯು ಹಿರಿದು. ಈ ನಿಟ್ಟಿನಲ್ಲಿ ಕಾವ್ಯ ಛಂದಸ್ಸು, ಅಲಂಕಾರಗಳಿಂದ ಸಿಗಂರಿಸಿಕೊಂಡು ಮನಸ್ಸಿಗೆ ಮುದ ನೀಡುವ ಪ್ರಕಾರ ಕಾವ್ಯ...... ಆಧುನಿಕ  ಕಾವ್ಯವು ಶಾಸ್ತ್ರೀಯ ಚೌಕಟ್ಟನ್ನು ಮೀರಿಯು ಹೊಸ ಪ್ರಾಸದೊಂದಿಗೆ ಸುಂದರ ಪದಪುಂಜಗಳಲ್ಲಿ ರೂಪುಗೊಂಡು  ಸಹೃಯರ ತನುಮನಗಳಿಗೆ ತಂಪೆರೆಯುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇಂದಿನ ಯುವಕವಿಗಳ ನವನವೀನ ಕವಿತೆಗಳು ಜೀವೋನ್ಮುಖಿ ಚಿಂತನೆಗಳೊಂದಿದೆ ರಚನೆಯಾಗುತ್ತಿರುವುದು ಕನ್ನಡ ಸಾಹಿತ್ಯದ ಬೆಳವಣಿಗೆಯ  ಯುವೋದಯದ ಕಾಲವಾಗಿ ಕಾಣಬಹುದಾಗಿದೆ.
ಈ ದಿಸೆಯಲ್ಲಿ ಪ್ರಸ್ತುತ ಸಮಾಜದ ವಾಸ್ತವ ಕನ್ನಡಿಯ ಹಲವು ಕವಿತೆಗಳು ಅತ್ಯಂತ ಜವಾಬ್ದಾರಿಯುತವಾಗಿ ರಚನೆಗೊಳ್ಳುತ್ತಿವೆ. ಈ ರಚನೆಗಳು ಕಳೆದ ಶತಮಾನದ ಕಾವ್ಯಲೋಕದ ಸ್ಥಿರಮಾದರಿಗಳಾಗಿ ಜನಿಸದಿದ್ದರೂ  ವಾಸ್ತವವನ್ನು ಪ್ರತಿನಿಧಿಸುವ ಸರಳ ಶೈಲಿ ಕಾವ್ಯಶಕ್ತಿಗಳಾಗಿವೆ. ಅಂಕುರ ಅವರ 'ಅನ್ನ ದೇಗುಲ' ಕವಿತೆಯು ಎತ್ತಿಕೊಂಡವರ ಕೂಸು ಸಂಕಲನದ  ಸಾತ್ವಿಕ ಚಿಂತನೆಯಾಗಿ ಶೋಧಿಸಬಹುದು. ಈ ಕವಿತೆಯ ಒಳಪದರುಗಳನ್ನು ನಮ್ಮ ತುರ್ತುಗಳಿಗೆ ವ್ಯವಸ್ಥಿತಗೊಳಿಸಿ ನೋಡಿದರೆ ಹಲವು ಹೊಸ ಆಯಾಮಗಳು ದೊರೆಯಬಹುದು.

ಅನ್ನ ದೇಗುಲದೊಳಗೆ
ನಿನ್ನ ನಾ ಕಾಣುತಿಹೆ ನಿನ್ನೊಳಗೂ ನಾ ಕಾಣಬಹುದೇ!

 ಇಡೀ ವಿಶ್ವವನ್ನೇ  ಒಂದು  ಅನ್ನದೇಗುಲವಾಗಿ ನೋಡುವುದಾದಲ್ಲಿ, ಇಲ್ಲಿನ ಎಲ್ಲಾ ಚರಾಚರ ವಸ್ತುಗಳು ನಮ್ಮ ಪಂಚೇಂದ್ರಿಯಗಳ ಹಸಿವಿಗೆ ಆಹಾರವಾಗಿ ಒದಗುವ ಪ್ರಕ್ರಿಯೆ ನಡೆಯುತ್ತಿದೆ. ಈ ಕವಿತೆಯಲ್ಲಿ ಅನ್ನಬ್ರಹ್ಮನನ್ಮೂ, ಪರಬ್ರಹ್ಮನ್ನೂ ಹುಡುಕುವಲ್ಲಿ ಒಂದರೊಳಗೊಂದರ ಇರುವಿಕೆಯ ತತ್ವವೂ,  ಸೃಷ್ಟಿಯ ಜೀವರಾಶಿಯಲ್ಲಿ  ವಿಶೇಷವಾದ ಮನುಷಜೀವ ಸಂಬಂಧಗಳಾದ ಸತಿಪತಿ ಬಾಂದವ್ಯದಲ್ಲಿ ಒಂದರೊಳಗೊಂದಾಗಿ ಬಾಳುವ ಆತ್ಮೀಯ ಪ್ರೀತಿಯನ್ನು ಕಾಣಬಹುದು.

  ಇಲ್ಲಿ ಹೆಣ್ಣು ಅನ್ನಬ್ರಹ್ಮನೊಳಗೆ ತನ್ನ ಜೀವನಾಧಾರವಾಗಿರುವ ಬಾಳ ಸಂಗಾತಿಯನ್ನು ಕಾಣುವ ಪರಿ ಇದಾಗಿದೆ. ಪರಂಪರೆಯಿಂದಲೂ ಅನ್ನಕ್ಕಾಗಿ ದುಡಿಯುತ್ತಿರುವವನು ಮತ್ತು ಒದಗಿಸುವವನು,ಜೀವ ಪೋಷಕನು ಪುರುಷನೇ ಆಗಿದ್ದಾನೆ.ಹಾಗಾಗಿಯೇ ಅನ್ನದೇಗುಲದಲಿ ತನ್ನ ಜೀವಜೊತೆಗಾರನ್ನು ಕಾಣುವ ಹಂಬಲವಾಗಿದೆ. ನಿನ್ನೊಳಗೂ ನಾ  ಕಾಣಬಹುದೇ ಎಂಬುದು ಪ್ರಶ್ನೆಯಾಗಿದ್ದರೂ ಕಾಣುವ ಅರ್ಥ  ಸಾಧ್ಯತೆಯು ಈ ಕವಿತೆ ಮುಂದಿನ ಸಾಲುಗಳಲ್ಲಿ ಸಹೃದಯನಿಗೆ ದಕ್ಕುತ್ತದೆ.

ನನ್ನೆದೆಯ ಇತಿಹಾಸ
ನಿನ್ನೆದೆಗೆ ಮಧುಪ್ರಾಸ
ಬಡತನವೆ ಇರಲಿ ಬಾಳಕೊನೆಗೆ.

ಸ್ತ್ರೀ ಒಲವಿನ ಚೈತನ್ಯವೇ ಪುರುಷನ ಜೀವನಾಕಾಂಕ್ಷೆಗೆ  ಪ್ರೇರಣೆ. ಆಕೆ ತನ್ನ ಇರುವಂತಿಕೆ, ಸದ್ಗುಣಗಳು, ವ್ಯಕ್ತಿತ್ವ, ನಡವಳಿಕೆ,  ಪ್ರೀತಿ- ಪ್ರೇಮ, ವಾತ್ಸಲ್ಯ, ಅನುರಾಗ ಎಲ್ಲವೂ ನಿನಗೆ ಮಧುವಂತೆ ಸಿಹಿ ನೀಡಲಿ, ಬಾಳು ಹಿತಕರವಾಗಿರಲಿ ಎನ್ನುವ ಆಶಯ ವ್ಯಕ್ತಪಡಿಸಿರುವುದನ್ನು ಕಾಣಬಹುದು. ನಮ್ಮ ಒಲವಿನ ಬದುಕಿನಲಿ ಬಡತನವೇ ಬಂದರೂ ಸರಿ ಇಬ್ಬರಲ್ಲೂ ಮಮತೆ, ಕರುಣೆ,ಕಾಳಜಿ,ಸ್ನೇಹ, ಬಾಂಧವ್ಯಗಳು ಚೈತ್ರಕಾಲದಂತೆ ಸದಾ ಹಚ್ಚಹಸುರಾಗಿರಲಿ. ಬಾಳ ಕೊನೆತನಕ ಪ್ರೇಮ ಬಂಧುರತೆ ಉಳಿಯಲಿ ಎನ್ನುವುದಾಗಿದೆ.

ಎಲ್ಲ ದೇವರನಿಲ್ಲಿ
ಆಯ್ದು ಹುಡುಕುತಲಿರುವೆ
ನನ್ನ ಜೀವದ ದೇವ ನೀನೆ ಇಲ್ಲಿ..

ಹೆಣ್ಣು ತಾನು ನಿತ್ಯ ನಿರ್ವಹಿಸುವ ಕಾಯಕದಲ್ಲಿ ತನ್ನ ಅನ್ನಬ್ರಹ್ಮನನ್ನು ಹುಡುತ್ತಿದ್ದಾಳೆ. ಅಕ್ಕಿ ಹಾಯಿಸುವ, ಭತ್ತಕುಟ್ಟುವ,ರಾಗಿ ಬೀಸುವ, ಪೈರು ನೆಡುವ, ಕಳೆ ತೆಗೆದು ಹಸನುಗೊಳಿಸುವ ಎಲ್ಲಾ ಸಂದರ್ಭದಲ್ಲಿ ತನ್ನವನನ್ನೇ ನೆನೆಯುತ್ತಿದ್ದಾಳೆ. ತನ್ನ ಪ್ರಾಣಕಾಂತನಾಗಿರುವ  ಸಂಗಾತಿಯನ್ನೇ ದೇವರಂತೆ ಕಾಣುತ್ತಿದ್ದಾಳೆ. ಹೆಣ್ಣು ಪರಂಪರೆಯಿಂದಲೂ ಪತಿಯೇ ಪರದೈವವೆಂದು ನಂಬಿರುವ
ಸಂಸ್ಕೃತಿಯನ್ನು ಕಾಣಬಹುದು.

ಕುರುಡೆಂಬ ಕತ್ತಲೆಗೆ
ಬರಡು ಬೀಜವ ಬಿತ್ತಿ
ಇದು ಜೀವದೆರಡು ಸೊಲ್ಲು ಕೇಳು ಇಲ್ಲಿ.

ಅಜ್ಞಾನವೆಂಬ ಅಂಧಕಾರದಲ್ಲಿರುವವರಿಗೆ  ಸಮಾಜದಲ್ಲಿ ವ್ಯರ್ಥ ಚಿಂತನೆಗಳು ತುಂಬಿದರೆ ಜನರ  ಜೀವನ ಹೇಗೆ ಸುಧಾರಣೆ ಆಗಲು ಸಾಧ್ಯ. ಇಂದು ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದ ಎಂದೆಲ್ಲಾ ತಮ್ಮ ವ್ಯಕ್ತಿಕ ಅಭಿಪ್ರಾಯಗಳನ್ನು, ಉಪಯುಕ್ತವಲ್ಲದ ವಿಚಾರಗಳನ್ನು ಬಿತ್ತುವುದರಿಂದ ಯಾವ ಪ್ರಯೋಜವಾಗುತ್ತಿದೆ. ಮತ್ತೊಂದು ರೀತಿಯಲ್ಲಿ ವೈಯಕ್ತಿಕ ಬದುಕನ್ನು ಹರಿಸಿ ಸ್ವಾರ್ಥ ಆಸೆ ಆಮಿಷಗಳನ್ನು ಈಡೇರಸಿಕೊಳ್ಳುವಲ್ಲಿ ಹೆಣ್ಣು- ಗಂಡು  ತಮ್ಮ ಕುಟುಂಬಗಳನ್ನು ಅಧಃ ಪತನಕ್ಕೆ ತಳ್ಳುತ್ತಿರುವುದು ಕಾಣಸಿಗುತ್ತದೆ. ಮಕ್ಕಳ ಭವಿಷ್ಯಕ್ಕೆ ಮಾದರಿಯಾಗಬೇಕಾದ ತಂದೆ- ತಾಯಿಯರೆ ಕಂಟಕರಾದರೆ ಅವರ ಜೀವನಗಳನ್ನು ರೂಪಿಸುವುದಾದರೂ ಯಾರು. ಸೋಲುತ್ತಿರುವ ಕುಟುಂಬ ಜೀವನವನ್ನು ಮತ್ತೆ ಕಟ್ಟುವ ಜವಾಬ್ದಾರಿ ಇದೆ.  ಮತ್ತು
 ಇಂದು ಸಮಾಜದ ಅನೇಕ ಸಮಸ್ಯೆಗಳಿಗೆ ತೃಪ್ತಿ ಬದುಕನ್ನು ಕಲಿಸುವ ಸಾಹಿತ್ಯ ನಿರ್ಮಾಣದ ಅಗತ್ಯದೆ ಇದೆ.

 ಜನಪ್ರಿಯತೆಯ ಹಿಂದೆ ಬಿದ್ದ ಬರಹಗಳಲ್ಲಿ ಸಮಾಜಕ್ಕೆ ಯಾವ ರೀತಿಯ ಸಂದೇಶಗಳನ್ನು ನೀಡುತ್ತವೆ. ಶಿಕ್ಷಣ ಸಂಸ್ಥೆಗಳು ಹಣ ಸಂಪಾದನೆ ಒಂದೇ ಮುಖ್ಯ ಗುರಿಯಾಗಿಸಿಕೊಂಡು ಮಕ್ಕಳನ್ನು ಬರಡು ಬೀಜಗಳನ್ನಾಗಿ ತಯಾರು ಮಾಡುತ್ತಿವೆ. ಇಂತಹ ಸಂದಿಗ್ಧತೆಯನ್ನು ಎದುರಿಸುತ್ತಿರುವ ಸಮಾಜಕ್ಕೆ ತಮ್ಮಂತೆ ತಾವು  ನಿರಂತರ ದುಡಿದು ಬದುಕುತ್ತಿರುವ ಎರಡು ಜೀವಗಳ ಬದುಕಿನ ಅನುಭವದ ಸೊಲ್ಲು ಅರ್ಥಪೂರ್ಣ ಬದುಕಿಗೊಂದು ತತ್ವದಂತೆ ಈ ಕವಿತೆ ಧ್ವನಿಸುತ್ತದೆ.

ನಾ ನಿನಗೆ ನೀ ನನಗೆ
ನಿನ್ನಾಗೆ ನನ್ನ ನಗೆ
ಇರಲಿ ಬಿಡು ಬೆವರೂಟ ಈ ಬಾಳ ಪದಿಗೆ!

ಕೂಡಿ ಬಾಳಿದರೆ ಸ್ವರ್ಗ ಎನ್ನುವಂತೆ, ಇಬ್ಬರೂ ಒಂದಾಗಿ ಬಾಳುವ ಜೀವನ ಪಯಣದಲಿ ನಿನ್ನ ಪ್ರೀತಿಧಾರೆಯಲ್ಲಿಯೇ ನನ್ನ ಸಂತೋಷ ಅಡಗಿದೆ. ನೀ ನನಗೆ, ನಾ ನಿನಗೆ....ಎನ್ನುವಲ್ಲಿ ಜೀವನದ ಎಲ್ಲ ಕಷ್ಟ-ಸುಖ, ಸೋಲು -ಗೆಲುವುಗಳು ಒಂದೇ ರೀತಿ ಸ್ಪರ್ಶಿಸಿ, ಸ್ಪಂದಿಸಿ ಒಳಗೊಳ್ಳುವಿಕೆ ಹಾಗು ಆತ್ಯಂತಿಕ ಪ್ರೇಮದ ಎಲ್ಲೆ ಮೀರಿದ  ಅರ್ಧನಾರೀಶ್ವರ ತತ್ವ ತತ್ವದಂತೆ ತಮ್ಮ ಒಲವಿನ  ದಾಂಪತ್ಯದಲ್ಲಿ ಸಮತೆಯ ಹರವು ಜೀವದನಿಯಾಗಿ, ಕಾವ್ಯದನಿಯಾಗಿ ಈ ಕವಿತೆಯಲ್ಲಿ  ಹೊಮ್ಮಿರುವುದು ಕಾಣಬಹುದು.

ಅಧ್ಯಯನ ಕೃತಿ :
ನಿರಂತರ ಪ್ರಕಾಶನ

Comments

Popular posts from this blog