ಕನ್ನಡಾಭಿಮಾನ
ಒಮ್ಮೆ ಮಾರವಾಡಿಗಳ ಬಟ್ಟೆ ಅಂಗಡಿಯಲ್ಲಿ ಸೀರೆ ಕೊಂಡುಕೊಳ್ಳಲೆಂದು ಹೋಗಿದ್ದೆ. ಆ ಅಂಗಡಿಯ ಬಳಿಗೆ ಒಬ್ಬ ಹೆಣ್ಣುಮಗಳು ಬಂದು “ಸರ್, ಒಂದೆರಡು ನಿಮಿಷ ಮಾತಾಡಬಹುದಾ ಎಂದು ಕೇಳಿದಳು.” ಆಗ ಅಂಗಡಿಯ ಮಾಲೀಕ “ ಏನು ವಿಷಯ ಹೇಳಿ,”ಎಂದು ಕೇಳಿದ. ಆಕೆ ಮಾಲೀಕನಿಗೆ “ಸರ್ ನಾನು ಕಾಲೇಜು ವಿದ್ಯಾರ್ಥಿನಿ ಬಡಮಕ್ಕಳ ಆಶ್ರಮಕ್ಕೆಸಹಾಯ ಮಾಡಲು ಹಣಸಂಗ್ರಹ ಮಾಡುತ್ತಿದ್ದೇನೆ. ಇದರಿಂದಾಗಿ ನನಗೆ ಕಾಲೇಜಿನಲ್ಲಿ ಪಾಯಿಂಟ್ಸ್ ಬರುತ್ತವೆ. ದಯಮಾಡಿ ಸಹಾಯಮಾಡಿ. ಪ್ಲೀಸ್ ಸರ್ ಇಷ್ಟೇ ಕೊಡಬೇಕೆಂದು ನಿಯಮವಿಲ್ಲ. ನಿಮಗೆ ತೋಚಿದಷ್ಟು ಹಣ ಕೊಡಿ. ರಶೀದಿಯನ್ನು ನೀಡುವೆ” ಎಂದಳು. ಅದಕ್ಕೆ ಮಾಲೀಕ “ಹಣ ಕೊಡಲಾಗುವುದಿಲ್ಲ. ಇಲ್ಲಿಂದ ಹೊರಡು” ಎಂದು ಗದರಿಸಿ ಕಳುಹಿಸಿದ. ನಾನು ಅಲ್ಲೇ ಎಲ್ಲವನ್ನೂ ನೋಡುತ್ತಿದ್ದುದರಿಂದ ಆ ಮಾರವಾಡಿ ವ್ಯಕ್ತಿ ನನಗೆ ಹೀಗೆ ಹೇಳಿದ. ಕೇಳಿ ಮೇಡಮ್, “ ಯಾರಿಗೆ ಬೇಕಾದರೂ ಹಣ ಕೊಡುವೆ. ಈ ಬೆಂಗಳೂರಿನ ಕನ್ನಡಿಗರಿಗೆ ಹಣ ಕೊಡುವುದಿಲ್ಲ” ಎಂದು ಹೇಳಿದ. ಯಾಕೆ? ಕಾರಣವೇನೆಂದು ಕೇಳಿದೆ. ಆತ “ಒಮ್ಮೆ ನಾವು ಸ್ಟ್ರೈಕ್ ಮಾಡುತ್ತಾ ಬರುತ್ತಿದ್ದೆವು. ನನ್ನ ಮೊಬೈಲ್ ಲ್ಲಿ ಬ್ಯಾಟರಿ ಡೌನ್ ಆಗಿತ್ತು. ಆಗ ಗಲಾಟೆಗಳು ಆಗುವ ಬಗ್ಗೆ ಮಾಹಿತಿ ನೀಡಲು ಮೊಬೈಲ್ ಚಾಲ್ತಿಯಲ್ಲಿರಬೇಕಿತ್ತು. ಚಾರ್ಜ್ ಮಾಡಿಕೊಡಿ ಎಂದು ಬಹಳ ಅಂಗಡಿಯವರನ್ನು ಕೇಳಿದೆ ಒಬ್ಬರೂ ಸಹಕರಿಸಲಿಲ್ಲ. ಹಾಗಾಗಿ ಅಂದಿನಿಂದ ಕನ್ನಡದವರಿಗೆ ಹಣ ಕೊಡುವುದಿಲ್ಲ” ಎಂದು ಹೇಳಿದ. ನನಗೆ ಎಲ್ಲಿಲ್ಲದ ಸಿಟ್ಟು ಒತ್ತರಿಸಿ ಬಂತು. “ಕೇಳಣ್ಣ ಇಲ್ಲಿ!ನೀನು ಹಣ ಕೊಡದಿದ್ದರೂ ಪರವಾಗಿಲ್ಲ ಇನ್ಯಾರಾದರೂ ಕೊಡುತ್ತಾರೆ. ನೀನು ಸಹಾಯ ಕೇಳಿದ ಸಂದರ್ಭ ಸರಿಯಾದ್ದು ಆಗಿರಲಿಲ್ಲ. ನಿನಗೆ ಯಾರು ಸಹಕರಿಸಿಲ್ಲ. ಕನ್ನಡಿಗರ ವ್ಯಾಪಾರವನ್ನೇ ಕಿತ್ತುಕೊಂಡು ‘ಚಿಕ್ಕಪೇಟೆ’ ಆಳುತ್ತಿರುವ ನೀವು ಕೂತಿರುವ ಭೂಮಿ ಕನ್ನಡಿಗರದ್ದು, ನೀವು ಕುಡಿಯುವ ನೀರು ಕನ್ನಡ ನಾಡಿನದ್ದು, ನೀವು ಉಸಿರಾಡುವ ಗಾಳಿಯು ಕನ್ನಡ ನಾಡಿನದ್ದೇ. ನಿಮ್ಮ ಬದುಕು ನಡಿತಿರೋದೆ ಕನ್ನಡಿಗರಿಂದ ಎಂಬುದನ್ನು ಮರೆಯಬೇಡಿ” ಎಂದು ಛೀಮಾರಿಹಾಕಿ ಹೊರನಡೆದೆ. - ಅನುಕೃತಿ
Comments
Post a Comment